ಎಪಿಡೆಂಡ್ರಮ್
	ಮರದ ಮೇಲೆ ಬೆಳೆಯುವ ಒಂದು ಜಾತಿಯ ಸಸ್ಯ. ಅರ್ಕಿಡೆಸಿಯ ಕುಟುಂಬದಲ್ಲಿ ಈ ಜಾತಿಯೇ ದೊಡ್ಡದು. ಇದರಲ್ಲಿ ಸಾವಿರಕ್ಕೂ ಹೆಚ್ಚು ಪ್ರಭೇದಗಳಿವೆ. ಹೂವುಗಳು ಸಂಕೀರ್ಣ ರೀತಿಯವಾಗಿದ್ದು ಬಹು ಸುಂದರವಾಗಿವೆ. 

	ಈ ಜಾತಿಯ ಅರ್ಕಿಡ್ಡುಗಳು ಸಾಮಾನ್ಯವಾಗಿ ಅಪ್ಪು ಸಸ್ಯಗಳಾಗಿ ಬೆಳೆಯುತ್ತವೆ. ಕೆಲವು ನೆಲಸಸ್ಯ, ಶಿಲಾಸಸ್ಯಗಳಾಗಿಯೂ ಬೆಳೆಯುವುದುಂಟು. ಇವು ಬಹುವಾರ್ಷಿಕ ಸಸ್ಯಗಳು. ಈ ಕೆಲವಕ್ಕೆ ಗುಪ್ತಕಾಂಡ ಉಂಟು. ಕೆಲವಕ್ಕೆ ಇಲ್ಲ. ಈ ಕಾಂಡ ಗುಂಡಾಗಿ, ದಪ್ಪವಾದ ನಕಲಿಲಶುನವಾಗಿ ಬೆಳೆಯುತ್ತದೆ. ಎಲೆ ಮೃದು ಚಪ್ಪಟೆಯಾಗಿದ್ದು ಕೊಳವೆಯಾಕಾರ, ಭರ್ಜಿಯಾಕಾರಗಳಲ್ಲಿವೆ. ಹೂ ಗೊಂಚಲು ಸಾಮಾನ್ಯವಾಗಿ ತುದಿಯಲ್ಲಿರುತ್ತದೆ. ಕೆಲವು ಸಾರಿ ಕಂಕುಳಲ್ಲಿರುವುದೂ ಉಂಟು. ಗೊಂಚಲು ಅತ್ಯಾರಂಭಿ ಅಥವಾ ಮಿಶ್ರ ಮಾದರಿಯದು. ಹೂಗಳ ಪ್ರಭೇದಗಳಿಗೆ ಅನುಸಾರವಾಗಿ ಬದಲಾಗುತ್ತದೆ. ಹೂಕಂಬಕ್ಕೆ ತುಟಿ ಅಂಟಿಕೊಂಡಿರುತ್ತದೆ. ಕಂಬದ ತುದಿಯಲ್ಲಿರುವ ಪರಾಗಕೋಶಗಳಲ್ಲಿ ಪರಾಗಚೀಲಗಳು ಇವೆ. 

ಎಪಿಡೆಂಡ್ರಮ್ ಫ್ರ್ಯಾಗ್ರನ್ಸ್
ಈ ಪ್ರಭೇದ ಮಧುರ ವಾಸನೆಯನ್ನು ಬೀರುವುದರಿಂದ ಈ ಹೆಸರು. ನಕಲಿಲಶುನ ಕರನೆಯಾಕಾರದಲ್ಲಿದೆ. ಬಣ್ಣ ಹಳದಿ ಅಥವಾ ಹಸಿರು. ಎಲೆ ಒಂಟಿ. ಆಕಾರ ದೀರ್ಘವೃತ್ತದಂತೆ, ತುದಿ ಮೊಂಡು ಅಥವಾ ಮೊನಚು. ಒಂದು ಗೊಂಚಲಿನಲ್ಲಿ ಸುಮಾರು 2 ರಿಂದ 10 ಹೂಗಳು ಇರುತ್ತವೆ. ಹೂಗಳು ಹಳದಿ ಅಥವಾ ಹಸಿರು ಮಿಶ್ರಿತ ಬಿಳುಪು ಬಣ್ಣದವು. ವಾಸನೆ ಪ್ರಿಯ. ಕೆಲಜಾತಿಗಳಲ್ಲಿ ಅಪ್ರಿಯವೂ ಹೌದು. ತುಟಿ ಬಿಳುಪು ಅಥವಾ ತೆನೆ ಬಿಳುಪು. ಇದರ ಬುಡದಿಂದ ಊದಾ ಅಥವಾ ಕಡುಗೆಂಪು ಬಣ್ಣದ ಗೆರೆಗಳು ತುದಿಯ ಕಡೆಗೆ ಹರಿಯುತ್ತವೆ. 
ಎಪಿಡೆಂಡ್ರಮ್ ಅಲಾಟಮ್ : ಈ ಪ್ರಭೇದ ಎತ್ತರವಾಗಿ ಬೆಳೆಯುತ್ತದೆ. ನಕಲಿಲಶುನ ಬುಡದಲ್ಲಿ ಅಗಲವಾಗಿದ್ದು ತುದಿಯಲ್ಲಿ ಕಿರಿದಾಗಿದೆ. ಎಲೆ 2 ಅಥವಾ ಹೆಚ್ಚು. ಬುಡದಲ್ಲಿ ಕೊಳವೆಯಂತಿರುವ ತೊಟ್ಟುಗಳಿಂದ ಕೂಡಿದ್ದು ಒರಟಾಗಿ ಚರ್ಮದಂತೆ ಇದ್ದು, ನೀಳಾಕಾರ ಅಥವಾ ಭರ್ಜಿಯಾಕಾರದಲ್ಲಿದೆ. ಹೂ ಗೊಂಚಲು ಅಂತ್ಯಾರಂಭಿ ಅಥವಾ ಮಿಶ್ರ ಮಾದರಿಯದು. ಇವುಗಳ ಬಣ್ಣ, ಆಕಾರ ಮತ್ತು ಗಾತ್ರಗಳಲ್ಲಿ ಬಹಳ ವೈವಿಧ್ಯವುಂಟು. ಹೂ, ಎಲೆ ಮತ್ತು ಹೂದಳಗಳ ಬಣ್ಣ ಹಳದಿ ಮಿಶ್ರಿತ ಹಸಿರು. 	

ಎಪಿಡೆಂಡ್ರಮ್ ಪಾಲಿಯಾಂತಮ್
ಈ ಪ್ರಭೇದದ ಬಾಹ್ಯರೂಪರಚನೆಗಳಲ್ಲಿ ಬಹಳ ಭಿನ್ನತೆಯುಂಟು. ಸುಮಾರು 1' ರಿಂದ 4' ಎತ್ತರ ; ಎಲೆಗಳಿಂದ ಆವರಿಸಲ್ಪಟ್ಟಿರುವುದರಿಂದ ಗೋಪ್ಯವಾಗಿರುತ್ತದೆ. ಎಲೆ ನೀಳಾಕಾರ, ಕದರಿನಾಕಾರ ಅಥವಾ ಭರ್ಜಿಯಾಕಾರದಲ್ಲಿದೆ. ಹೂಗೊಂಚಲು ಅಂತ್ಯಾರಂಭಿ. ಅಂಡಾಶಯಕ್ಕೆ ತೊಟ್ಟಿರುತ್ತದೆ. ಬಣ್ಣ ಬಿಳಪು ಮಿಶ್ರಿತ ಹಳದಿ, ಕಿತ್ತಲೆ ಮಿಶ್ರಿತ ಹಳದಿ, ಹಸಿರು ಮಿಶ್ರಿತ ಹಳದಿ, ಕಂದು ಮಿಶ್ರಿತ ಹಳದಿ ಮುಂತಾಗಿ ಹಲವು ತೆರ, ತುಟಿ ಆಳವಾಗಿ ಮೂರು ಭಾಗವಾಗಿದೆ. ಅದರ ಬಣ್ಣ ತಿಳಿಯಾಗಿರುವುದೂ ಉಂಟು. ತೀಕ್ಷ್ಣವಾಗಿರುವುದೂ ಉಂಟು. ಹೂದಳ ಆಕಾರದಲ್ಲಿ ದಾರದಂತೆ ಅಥವಾ ಚಮಚದಂತೆ. 

ಎಪಿಡೆಂಡ್ರಮ್‍ಸಿಲಿಯರೆ
ಇದು ಹೆಚ್ಚಿನ ಬೇಸಾಯದಲ್ಲಿರುವ ಪ್ರಭೇದ. ಲಶುನ ಕದಿರು ಅಥವಾ ಕೊಳವೆಯಾಕಾರದಲ್ಲಿದೆ. ಬಣ್ಣ ಬೂದಿ ಮಿಶ್ರಿತ ಹಸಿರು. ಇದು ಭೂಮಿಯಲ್ಲಿ ಹರಿಯುವ ಗುಪ್ತಕಾಂಡದಿಂದ ಹೊರ ಬಂದಿರುತ್ತದೆ. ಎಲೆ ಒಂದರಿಂದ ಎರಡು, ಚರ್ಮದಂತೆ ಒರಟು. ಆಕಾರ ಅಂಡವೃತ್ತ ಅಥವಾ ಆಯತ. ಪ್ರಾಪ್ತವಯಸ್ಸಿಗೆ ಮುನ್ನವೇ ಕೆಲವೇಳೆ ಹೂ ಬಿಡುವುದುಂಟು. ಹೂ ಗೊಂಚಲು ತುದಿಯಲ್ಲಿರುತ್ತದೆ. ಗಾತ್ರದಲ್ಲಿ ಹೂ ಚಿಕ್ಕವು. ಹೂ ಎಲೆ ಮತ್ತು ಹೂ ಹಳದಿ ಮಿಶ್ರಿತ ಹಸಿರು ಬಣ್ಣದವು. ತುಟಿ ಬಿಳುಪು, ಮಧ್ಯಭಾಗ ದಾರದಂತಿದೆ.							  		
	    
(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ